ತಂಡದ ಚರ್ಚೆ -
	ವಯಸ್ಕರ ಶಿಕ್ಷಣದಲ್ಲಿ ಅನುಸರಿಸಲಾಗುತ್ತಿರುವ ಹಾಗೂ ಶಾಲಾಕಾಲೇಜುಗಳಲ್ಲೂ ಈಚೆಗೆ ಪ್ರಚಾರಕ್ಕೆ ಬರುತ್ತಿರುವ ಒಂದು ಬೋಧನ ವಿಧಾನ (ಗ್ರೂಪ್ ಡಿಸ್ಕಷನ್). ಅಧುನಿಕ ಮನಶಾಸ್ತ್ರ ವೈಯಕ್ತಿಕ ಭಿನ್ನತೆಗಳನ್ನು ಗುರುತಿಸಿ ತರಗತಿಗೆಲ್ಲ ಒಂದೇ ರೀತಿಯಲ್ಲಿ ಬೋಧಿಸುವುದು ಉಚಿತವೆನಿಸಲಾರದೆಂದು ಸೂಚಿಸಿದ ಮೇಲೆ ಮಕ್ಕಳ ಶಿಕ್ಷಣದಲ್ಲಿ ವೈಯಕ್ತಿಕ ಗಮನವೀಯಲು ಅವಕಾಶವಾಗುವಂತೆ ಹಲವಾರು ನೂತನ ಶಿಕ್ಷಣ ಪದ್ಧತಿಗಳೂ ಬೋಧನ ವಿಧಾನಗಳೂ ಪ್ರಚಾರಕ್ಕೆ ಬಂದವು. ಮಾಂಡೆಸೊರಿ ಶಿಕ್ಷಣ, ಡಾಲ್ಟನ್, ಶಿಕ್ಷಣ, ವಿನೆಟ್ಕಿ ಶಿಕ್ಷಣ, ಗೇರಿ ಶಿಕ್ಷಣ ಮುಂತಾದವುಗಳು ಆ ಉದ್ದೇಶದಿಂದ ಪ್ರಚಾರಕ್ಕೆ ಬಂದ ನೂತನ ಶಿಕ್ಷಣ ಪದ್ಧತಿಗಳು. ಮೇಲ್ವಿಚಾರಣೆಯ ವ್ಯಾಸಂಗ, ತರಗತಿಯಲ್ಲಿ ವಿದ್ಯಾರ್ಥಿ ಪಾತ್ರವಹಿಸುವುದು, ಶೈಕ್ಷಣಿಕ ಮಾರ್ಗದರ್ಶನ, ಹಂಚಿಕೆಯ ಪಾಠಕ್ರಮ, ತಂಡದ ಚರ್ಚೆ ವಯಸ್ಕರ ಶಿಕ್ಷಣದಲ್ಲಿ ಪರಿಣಾಮಕಾರಿಯಾದ ಬೋಧನ ಕ್ರಮವೆಂದು ಆಗಲೇ ಪ್ರಚಾರಕ್ಕೆ ಬಂದಿತ್ತು. ಅದನ್ನು ಶಾಲಾಕಾಲೇಜುಗಳಲ್ಲಿ ಈಚೆಗೆ ಯಶಸ್ವಿಯಾಗಿ ಆಚರಣೆಗೆ ತರಲಾಗುತ್ತಿದೆ. ಹಾಗೂ ಅದರ ಅನುಷ್ಠಾನ ಕ್ರಮ ಶಾಸ್ತ್ರೀಯ ಸ್ವರೂಪವನ್ನು ತಾಳಿ ತರಗತಿಯ ಎಲ್ಲ ಮಕ್ಕಳಿಗೂ ಪರಿಣಾಮಕಾರಿಯೆನಿಸುವಂತೆ ಕಲಿಯುವ ಅವಕಾಶವನ್ನೂ ಒದಗಿಸುತ್ತದೆ. ತರಗತಿಯ ಸಾಮಾನ್ಯ ಬೋಧನ ಕ್ರಮದಲ್ಲಿ ಇದರಿಂದ ಮತ್ತೊಂದು ಸೌಲಭ್ಯ ಉಂಟು. ವಿಶಾಲವ್ಯಾಪ್ತಿಯ ವಿಷಯ ಯೋಜನೆ ಅಥವಾ ಉದ್ಯಮವೊಂದರ ವ್ಯಾಸಂಗ ಅಥವಾ ಅಚರಣೆಗೆ ಸಂಬಂಧಿಸಿದ ವಿವಿಧ ಮುಖಗಳನ್ನು ಬೇರೆ ಬೇರೆ ಅಗರಗಳಿಂದ ತರಗತಿಯ ಪ್ರತಿಯೊಬ್ಬರು ಸಂಗ್ರಹಿಸಿ ವ್ಯಾಸಂಗ ಮಾಡುವಾಗ ಪ್ರತಿ ವಿದ್ಯಾರ್ಥಿಯೂ ಅ ಎಲ್ಲ ಅಗರಗಳನ್ನೂ ಹುಡುಕಿ ಪ್ರತಿಯೊಂದು ಅಂಶವನ್ನೂ ಕುರಿತಂತೆ ವಿಷಯ ಸಂಗ್ರಹಿಸುವಾಗ ಕಾಲ ಮತ್ತು ಶ್ರಮದ ಪ್ರಮಾಣ ಅಧಿಕವಾಗಿರುತ್ತದೆ. ತಂಡದ ಚರ್ಚೆಯಲ್ಲಿ ಅ ವಿಷಯವನ್ನು ವಿಭಜಿಸಿ ತರಗತಿಯನ್ನೂ ಹಲವು ತಂಡಗಳನ್ನಾಗಿ ವಿಂಗಡಿಸಿ ಒಂದೊಂದು ಅಂಶದ ಪರಿಶೀಲನೆಯನ್ನೂ ಒಂದೊಂದು ತಂಡಕ್ಕೆ ಒಪ್ಪಿಸುವುದರಿಂದ ಅನ್ಯಥಾ ಆಗುತ್ತಿದ್ದ ಕಾಲ ಮತ್ತು ಶ್ರಮಗಳನ್ನು ವ್ಯಯದ ಮೊತ್ತವನ್ನು ಕಡಿಮೆ ಮಾಡಿದಂತಾಗುತ್ತದೆ. ಹಾಗೆ ಸಂಗ್ರಹಿಸಿದ ಅಂಶಗಳನ್ನು ಪ್ರತಿ ತಂಡವೂ ಇಡೀ ತರಗತಿಯ ಮುಂದೆ ಪರಿಶೀಲನೆಗೆ, ಚರ್ಚೆಗೆ ಇಡುವುದರಿಂದ ವಿಷಯದ ಎಲ್ಲ ಮುಖಗಳನ್ನೂ ಎಲ್ಲ ವಿದ್ಯಾರ್ಥಿಗಳೂ ಪರಿಚಯ ಮಾಡಿಕೊಳ್ಳುವ ಅವಕಾಶ ಇದ್ದೇ ಇದೆ. ಎಂದರೆ ಈ ಕ್ರಮ ಪರಿಣಾಮಕಾರಿಯಾದ ಬೋಧನಕ್ರಮವಾಗುವಂತೆ ಪರಿಣಾಮಕಾರಿಯಾಗಿ ಕಲಿಯುವ ಸೌಲಭ್ಯವನ್ನೂ ಹೊಂದಿದೆ.

ತಂಡದ ಚರ್ಚೆಯ ಕಾರ್ಯಕ್ರಮವನ್ನು ವಿಷಯ ಅಥವಾ ಉದ್ಯಮದ ಆಯ್ಕೆ, ತರಗತಿಯ ವಿಂಗಡಣೆ, ವಿಷಯ ಅಥವಾ ಘಟಕಗಳಾಗಿ ಉದ್ಯಮದ ವಿಭಜನೆ, ತಂಡಗಳಿಗೆ ಘಟಕಗಳ ಹಂಚಿಕೆ, ಅಗರಗಳ ವ್ಯಾಸಂಗಕ್ಕೆ ಅಧ್ಯಾಪಕರಿಂದ ಮಾರ್ಗದರ್ಶನ, ವ್ಯಾಸಂಗ ಅಥವಾ ಅನುಷ್ಠಾನ, ಆಯಾ ಘಟಕದ ಬಗ್ಗೆ ಆಯಾ ತಂಡದಲ್ಲಿ ಚರ್ಚೆ ಮತ್ತು ಅಂತಿಮವಾಗಿ ವಿಷಯದ ವರದಿ, ತರಗತಿಯ ಸಾಮಾನ್ಯಾಧಿವೇಶನದಲ್ಲಿ ತಂಡಗಳು ತಮ್ಮ ತಮ್ಮ ಘಟಕಗಳನ್ನು ಕುರಿತ ವಿಷಯದ ಮಂಡನೆ, ಚರ್ಚೆ, ಅನಿಮೋದನೆ, ಅಧ್ಯಾಪಕರ ನಿರೂಪಣೆ-ಈ ಅನುಕ್ರಮದ ಹಂತಗಳಾಗಿ ವಿಂಗಡಿಸಬಹುದು. ಸೂಕ್ತ ನಿರ್ದೇಶನದಲ್ಲಿ ಸ್ವತಂತ್ರವಾಗಿ ಕೆಲಸ ಮಾಡಬಲ್ಲ ವಯೋಮಾನದ ಎಂದರೆ ಪ್ರೌಢಶಾಲೆಯ ಮತ್ತು ಅದಕ್ಕೂ ಮೇಲಿನ ಹಂತಗಳಲ್ಲಿ ಈ ಕ್ರಮ ಬಳಸಬಹುದು.
ವ್ಯಾಸಂಗ ಮಾಡಬೇಕಾದ ವಿಷಯ, ಬಿಡಿಸಬೇಕಾದ ಸಮಸ್ಯೆ, ಆಚರಿಸಬೇಕಾದ ಉದ್ಯಮ-ಇವುಗಳ ಉದ್ದೇಶವನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಅದಕ್ಕಾಗಿ ಕಾರ್ಯಾಚರಣೆಗೆ ಇಡೀ ತರಗತಿಯ ಅಸಕ್ತಿಯನ್ನು ಪ್ರಚೋದಿಸಬೇಕು. ಅನಂತರ ಅ ವಿಷಯ ಅಥವಾ ಕಾರ್ಯಾಚರಣೆಯ ವಿವಿಧ ಮುಖಗಳು ವಿದ್ಯಾರ್ಥಿಗಳೇ ಗುರುತಿಸುವಂತೆ ನಿರ್ದೇಶಿಸಿ ಅ ಘಟಕಗಳನ್ನು ಪಟ್ಟಿ ಮಾಡಬೇಕು. ಅನಂತರ ಅ ಘಟಕಗಳ ಸಂಖ್ಯೆಗನುಗುಣವಾಗಿ ತರಗತಿಯನ್ನು ತಂಡಗಳನ್ನಾಗಿ ವಿಂಗಡಿಸಿ ಒಂದೊಂದು ತಂಡಕ್ಕೂ ಒಂದೊಂದು ವ್ಯಾಸಂಗ ಘಟಕವನ್ನು ವಹಿಸಬೇಕು. ಅ ಕಾರ್ಯದಲ್ಲಿ ಆಯಾ ಘಟಕ ವ್ಯಾಸಂಗಕ್ಕೆ ಅಗತ್ಯವಾಗಿ ಪರಿಶೀಲಿಸಬೇಕಾದ ಗ್ರಂಥ, ದರ್ಶಿಸಬೇಕಾದ ಉದ್ಯಮ ಅಥವಾ ವಿಚಾರಿಸಬೇಕಾದ ತಜ್ಞರು ಮುಂತಾದ ವಿವರಗಳನ್ನು ಒದಗಿಸಬೇಕು. ಅನಂತರ ಪ್ರತಿ ತಂಡವೂ ತನಗೊಪ್ಪಿಸಿದ ಕಾರ್ಯವನ್ನು ಆರಂಭಿಸುವುದು. ಒಂದು ತಂಡ, ಇನ್ನೊಂದು ತಂಡದ ವ್ಯಾಸಂಗ ಅಥವಾ ಕಾರ್ಯಾಚರಣೆಯ ಎಲ್ಲೆಯನ್ನೂ ದಾಟಿ ಪುನರುಕ್ತಿಯ ಅಪವ್ಯಯಕ್ಕೆ ಅವಕಾಶವಾಗದಂತೆ ಅದರದರ ಕಾರ್ಯ ಪರಿಮಿತಿಯನ್ನೂ ಸೂಚಿಸಬೇಕು.

	ಪ್ರತಿ ತಂಡವೂ ತನಗೊಪ್ಪಿಸಿದ ಘಟಕವನ್ನು ಕುರಿತಂತೆ ಅಗತ್ಯ ಮಾಹಿತಿಯನ್ನು ಸಂಗ್ರಹಿಸಿಕೊಂಡು ವ್ಯಾಸಂಗ ಅಥವಾ ಕಾರ್ಯಾಚರಣೆ ನಡೆಸುವುದು. ಅಗ ತಂಡದ ಸದಸ್ಯರು ಅಗತ್ಯವಾದಾಗ ತಮ್ಮೊಳಗೆ ವಿವರಣೆ ಚರ್ಚೆ ಮುಂತಾದವುಗಳ ಮೂಲಕ ನಡೆದಿರುವ ಕಾರ್ಯವನ್ನು ಪರಿಶೀಲಿಸಿ ವ್ಯಾಸಂಗವನ್ನು ಮುಂದುವರಿಸುವರು. ಸಾಮಾನ್ಯವಾಗಿ ಪ್ರತಿ ತಂಡಕ್ಕೂ ಒಬ್ಬೊಬ್ಬ ನಾಯಕನಿರುವುದುಂಟು. ಅವನ ನಿರ್ದೇಶನದಲ್ಲಿ ತಂಡ ತನ್ನ ಕಾರ್ಯವನ್ನು ನಿರ್ವಹಿಸುವುದು. ಪ್ರತಿ ತಂಡವೂ ಕೇವಲ ಹಲವಾರು ವಿದ್ಯಾರ್ಥಿಗಳನ್ನೊಳಗೊಂಡಿರುವುದರಿಂದ ಪ್ರತಿ ವಿದ್ಯಾರ್ಥಿಯೂ ವಿವರಣೆ, ಚರ್ಚೆ, ವ್ಯಾಖ್ಯಾನ ಸಲಹೆ ಮುಂತಾದವನ್ನು ನೀಡುವ ಅವಕಾಶವಿರುತ್ತದೆ. ದೊಡ್ಡ ಸಮೂಹದಲ್ಲಿ ಮಾತಾಡಲು ಹಿಂಜರಿಯುವ ಅಥವಾ ನಾಚಿಕೆ ಪಡುವ ವಿದ್ಯಾರ್ಥಿಗಳೂ ಸರಾಗವಾಗಿ ಚರ್ಚೆಯಲ್ಲಿ ಭಾಗವಹಿಸುವ ಅವಕಾಶವಿದ್ದು ಸಾಮಾಜಿಕ ಗುಣಗಳನ್ನು ಬೆಳೆಸಿಕೊಳ್ಳುವ ಅವಕಾಶವೂ ಇರುತ್ತದೆ. ಘಟಕಕ್ಕೆ ಸಂಬಂಧಿಸಿದ ವ್ಯಾಸಂಗ ಅಥವಾ ಕಾರ್ಯಚರಣೆಯಲ್ಲಿ ತಂಡದ ಪ್ರತಿಯೊಬ್ಬರೂ ಸಹಕರಿಸಿ ಕೆಲಸ ಮಾಡಬೇಕಾಗುವುದರಿಂದ ಅವರ ಸಾಂಘಿಕ ಗುಣಧರ್ಮಗಳೂ ವರ್ಧಿಸುತ್ತವೆ.

	ಸಾಮಾನ್ಯವಾಗಿ ಪ್ರತಿ ತಂಡಕ್ಕೂ ಕೊಡುವ ಘಟಕದ ಕ್ಲಿಷ್ಟತೆ ಮತ್ತು ವ್ಯಾಸಂಗವ್ಯಾಪ್ತಿ ಸುಮಾರು ಸರಿಸಮನಾಗಿದ್ದ ಒಂದು ನಿರ್ದಿಷ್ಟ ವೇಳೆಯ ಅವಧಿಯಲ್ಲಿ ಮುಗಿಸುವಂತಿರುತ್ತದೆ. ಎಲ್ಲ ತಂಡಗಳೂ ತಮ್ಮ ಕಾರ್ಯವನ್ನು ಪೂರೈಸಿದೊಡನೆ ಪ್ರತಿ ತಂಡವೂ ತನ್ನ ನಾಯಕನ ನೇತೃತ್ವದಲ್ಲಿ ವರದಿಯೊಂದನ್ನು ಸಿದ್ಧಪಡಿಸುತ್ತದೆ. ಅನಂತರ ಇಡೀ ತರಗತಿ ಸಮ್ಮೇಳನ ನಡೆಸುತ್ತದೆ. ಅಗ ಪ್ರತಿ ತಂಡದ ನಾಯಕನೂ ತನ್ನ ತಂಡ ನಡೆಸಿದ ವ್ಯಾಸಂಗದ ಅಥವಾ ಕಾರ್ಯಾಚರನೆಗೆ ಸಂಬಂಧಿಸಿದ ಎಲ್ಲ ಮುಖಗಳನ್ನೂ ಇಡೀ ತರಗತಿ ಪರಿಚಯ ಮಾಡಿಕೊಳ್ಳುತ್ತದೆ. ಶಂಕೆ, ಅಸ್ಪಷ್ಟತೆ ಇದ್ದರೆ ಅ ಬಗ್ಗೆ ಚರ್ಚೆ ನಡೆಯುತ್ತದೆ. ಅಧ್ಯಾಪಕರ ನೇತೃತ್ವದಲ್ಲಿ ವಿಷಯ ಪುನರ್ವಿಮರ್ಶೆಯಾಗಿ ಪ್ರತಿ ವಿದ್ಯಾರ್ಥಿಯೂ ಆಯ್ದು ಘಟಕದ ಬಗ್ಗೆ ಎಲ್ಲ ಮುಖಗಳಿಗೂ ಸಂಬಂಧಿಸಿದಂತೆ ಪರಿಚಯ ಮಾಡಿಕೊಳ್ಳುತ್ತಾನೆ. ತಮ್ಮ ಚಟುವಟಿಕೆಗಳಿಂದ ತಾವೇ ಅನುಭವವನ್ನು ಸಾಧಿಸಿ ಅದನ್ನು ಮುಂದಿನ ಚಟುವಟಿಕೆಗಳಿಂದ ಪುನರಚಿಸಿಕೊಳ್ಳುತ್ತ ಶಿಕ್ಷಣ ಪಡೆಯುವುದೇ ನಿಜವಾದ ಕಲಿಕೆ ಎಂಬ ಆಧುನಿಕ ಭಾವನೆಯೇ ಈ ನೂತನ ಬೋಧನ ಕ್ರಮಕ್ಕೆ ತಳಹದಿಯೆನ್ನಬಹುದು. ಇಲ್ಲಿ ಅಧ್ಯಾಪಕರು ನಿಷ್ಕ್ರಿಯರಲ್ಲ. ಅವರು ಮೊದಲಿಂದ ಕೊನೆಯ ವರೆಗೆ ಜಾಣ್ಮೆಯಿಂದ ತಮ್ಮ ಮಾರ್ಗದರ್ಶನ ಕಾರ್ಯದಲ್ಲಿ ತೊಡಗಿರುತ್ತಾರೆ. ಎಲ್ಲಿ ಯಾರಿಗೆ ಎಷ್ಟೆಷ್ಟು ಸಹಾಯ ಅಗತ್ಯ ಎಂಬುದನ್ನು ಅರಿತುಕೊಂಡು ಸಲಹೆ ಸಹಕಾರಗಳನ್ನು ನೀಡುತ್ತಾರೆ. ಅಡ್ಡದಾರಿ ಹಿಡಿದಾಗ ಎಚ್ಚರಿಸಿ ಸರಿಯಾದ ಮಾರ್ಗಕ್ಕೆ ತಿರುಗಿಸುತ್ತಾರೆ. ಎಂದರೆ ಸಾಮಾನ್ಯ ತರಗತಿಯ ಬೋಧನೆಗಿಂತ ಹೆಚ್ಚಿನ ಕೆಲಸವೂ ದಕ್ಷತೆಯೂ ಇಲ್ಲಿ ಅವರ ಭಾಗಕ್ಕೆ ಅಗತ್ಯವೆನಿಸುತ್ತದೆ.

	ಈ ವಿಧಾನ ಪರಿಣಾಮಕಾರಿಯೆನಿಸಿದ್ದರೂ ಎಲ್ಲ ವಿಷಯಗಳನ್ನೂ ಈ ವಿಧಾನದಿಂದಲೇ ವ್ಯಾಸಂಗ ಮಾಡುವುದೆಂದರೆ ವಿಪರಿತ ಕಾಲಹರಣವಾಗುತ್ತದೆ. ಪರೀಕ್ಷೆಗಳೇ ಪ್ರಧಾನ ಅಂಶವಾಗಿರುವ ಶಾಲಾಕಾಲೇಜುಗಳಲ್ಲಿ ಈ ಕ್ರಮವನ್ನನುಸರಿಸಿದರೆ ನಿಗದಿ ಮಾಡಿರುವ ವ್ಯಾಸಂಗ ವಿಷಯವನ್ನು ಪೂರ್ಣಗೊಳಿಸುವುದು ಅಸಾಧ್ಯವಾಗುತ್ತದೆ. ಅಲ್ಲದೆ ಕೆಲವು ವಿಷಯಗಳು ಈ ವ್ಯಾಸಂಗ ಕ್ರಮಕ್ಕೆ ಹೊಂದವು. ಎಲ್ಲಕ್ಕೂ ಮೇಲಾಗಿ ಸಾರ್ವತ್ರಿಕ ಶಿಕ್ಷಣ ಆಚರಣೆಗೆ ಬರುತ್ತಿರುವ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅಧ್ಯಾಪಕ ವರ್ಗ, ಉಪಕರಣಾದಿಗಳು, ಕಟ್ಟಡ-ಮುಂತಾದ ಸಾಧನ ಸಾಮಗ್ರಿಗಳ ಕೊರತೆ ಇರುವುದಾಗಿ ಈ ವಿಧಾನವನ್ನು ಅನುಸರಿಸುವುದರಿಂದ ವ್ಯಾಸಂಗ ತಕ್ಕಷ್ಟು ಪರಿಣಾಮಕಾರಿಯಾಗದಿರಬಹುದು. ಆದರೆ ಆಯ್ದ ಒಂದೆರಡು ವಿಷಯಗಳನ್ನು ಈ ರೀತಿಯ ವ್ಯಾಸಂಗಕ್ಕೆ ಅಳವಡಿಸಿಕೊಂಡಲ್ಲಿ ಮಕ್ಕಳಿಗೆ ವ್ಯಾಸಂಗ ನಿಜವಾದ ಕ್ರಮ ತಿಳಿದಂತಾಗುತ್ತದೆ.
 (ಎನ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ